ಹಾರ್ದಿಕ್ ಪಾಂಡ್ಯ ವಿಶ್ವಕಪ್ ಟೂರ್ನಿಯ ಉಳಿದ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಈ ಸುದ್ದಿ ಅಧಿಕೃತವಾಗಿ ಘೋಷಣೆಯಾದ ಬಳಿಕ ಹಾರ್ದಿಕ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ. ಈ ವಿಶ್ವಕಪ್‌ನಲ್ಲಿ ಪುಣೆಯಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಪಂದ್ಯವನ್ನಾಡುತ್ತಿದ್ದಾಗ ಹಾರ್ದಿಕ್ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದರು.
ಬಳಿಕ ಅವರು ಮುಂದಿನ ಎರಡು ಪಂದ್ಯಗಳಿಂದಲೂ ಆಡುವ ಬಳಗದಿಂದ ಹೊರಬಿದ್ದಿದ್ದರು.
ಶನಿವಾರ ಐಸಿಸಿ ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನ ಉಳಿದ ಭಾಗದಿಂದ ಹೊರಬಿದ್ದಿದ್ದಾರೆ ಎನ್ನುವುದನ್ನು ಘೋಷಣೆ ಮಾಡಿದೆ. ಅಲ್ಲದೆ ಪ್ರಸಿದ್ಧ್ ಕೃಷ್ಣ ಅವರು ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಯಾಗಲು ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿತ್ತು. ನಂತರ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
“ವಿಶ್ವಕಪ್‌ನ ಉಳಿದ ಭಾಗದಿಂದ ನಾನು ಹೊರಗುಳಿಯಲಿದ್ದೇನೆ ಎನ್ನುವ ಈ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ. ನಾನು ತಂಡದ ಜೊತೆಗೆ ಇರಲಿದ್ದು ಪ್ರತಿ ಪಂದ್ಯದ ಪ್ರತಿ ಎಸೆತಕ್ಕೂ ನಾನು ಉತ್ಸಾಹದಿಂದ ಹುರಿದುಂಬಿಸುತ್ತೇನೆ. ಈವರೆಗೆ ನಿಮ್ಮಿಂದ ದೊರೆತ ಪ್ರೀತಿ ಬೆಂಬಲ ಅಭೂತಪೂರ್ವವಾದದ್ದು ಅದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಈ ತಂಡ ವಿಶೇಷವಾದದ್ದು ಹಾಗೂ ಎಲ್ಲರೂ ಹೆಮ್ಮೆ ಪಡುವಂತೆ ನಾವು ಮಾಡಲಿದ್ದೇವೆ” ಎಂದು ಹಾರ್ದಿಕ್ ಪಾಂಡ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
https://twitter.com/hardikpandya7/status/1720674640778211480?ref_src=twsrc%5Etfw%7Ctwcamp%5Etweetembed%7Ctwterm%5E1720674640778211480%7Ctwgr%5E23dba368468c88e8358f0063ddc06fa908d2b8d6%7Ctwcon%5Es1_c10&ref_url=http%3A%2F%2Fapi-news.dailyhunt.in%2F
ಟೀಮ್ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಭಾಗವಾಗಿದ್ದರು. ಆಲ್‌ರೌಂಡರ್ ಆಗಿ ಹಾರ್ದಿಕ್ ತಂಡಕ್ಕೆ ಅದ್ಭುತವಾದ ಸಮತೋಲನ ನೀಡಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಸಮಾನವಾಗಿ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವ ಕಾರಣದಿಂದಾಗಿ ಹಾರ್ದಿಕ್ ತಂಡಕ್ಕೆ ದೊಡ್ಡ ಅಸ್ತ್ರ ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರತ ಸದ್ಯ ಐವರು ಸ್ಪೆಶಲಿಸ್ಟ್ ಬೌಲರ್‌ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಹಾರ್ದಿಕ್ ಪಾಂಡ್ಯ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಬದಲಿ ಆಟಗಾರನಾಗಿ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಅವಕಾಶ ದೊರೆತಿದೆ.
ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಅದಾದ ಬಳಿಕ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಿಂದ ಅವರು ಹೊರಗುಳಿಯುವಂತಾಗಿತ್ತು. ಬೆಂಗಳೂರಿನ ರಿಹ್ಯಾಬ್‌ಗಾಗಿ ಎನ್‌ಸಿಎಗೆ ಸೇರಿಕೋಮಡಿದ್ದ ಅವರು ಸೆಮಿಫೈನಲ್‌ಗೂ ಮುನ್ನ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಅಸಾಧ್ಯವಾಗಿರುವ ಕಾರಣ ಇದೀಗ ಅವರು ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಅಲಭ್ಯವಾಗುವಂತಾಗಿದೆ.